Thursday, February 27, 2020

ಬಿ. ಎಸ್. ವೆಂಕಟಲಕ್ಷ್ಮಿ ಮತ್ತು ಎಚ್. ಎನ್. ಶಾಮರಾಯರ ಸ್ಮರಣಾರ್ಥ ಉಪನ್ಯಾಸ


ಎಚ್. ಎನ್. ಶಾಮರಾಯರು ತಮ್ಮ ಅಗಲಿದ ಪತ್ನಿ (ಲೇಖಕಿ) ಬಿ. ಎಸ್. ವೆಂಕಟಲಕ್ಷ್ಮಿಯವರ ನೆನಪಿನಲ್ಲಿ ಬೆಂಗಳೂರಿನ 'ಸುಚಿತ್ರ ಕಲಾಕೇಂದ್ರ' ದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕೆಂದು ನಿರ್ಧರಿಸಿದ್ದರು. ತಮ್ಮ ಅನಾರೋಗ್ಯದ ನಡುವೆಯೂ  ಆ ಬಗ್ಗೆ ಆಪ್ತರಲ್ಲಿ ಚರ್ಚಿಸಿ ಕಾರ್ಯಪ್ರವೃತ್ತರಾಗಿದ್ದರು. ಮೊದಲ ಕಾರ್ಯಕ್ರಮವನ್ನು ಅವರ  ಮತ್ತು ವೆಂಕಟಲಕ್ಷ್ಮಿಯವರ  ಆಪ್ತರಾದ ನೆಚ್ಚಿನ ಸಾಹಿತಿ ಜಯಂತ್ ಕಾಯ್ಕಿಣಿಯವರಿಂದ  ಆರಂಭಿಸಬೇಕೆಂದುಕೊಂಡಿದ್ದರು. ನಾಲ್ಕೈದು ತಿಂಗಳಿಂದ ಆ ಬಗ್ಗೆ ಪ್ರಯತ್ನಿಸುತ್ತಿದ್ದರೂ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟು ಇತ್ತೀಚಿಗೆ ಫೆಬ್ರವರಿ ೯ರಂದು ನಡೆಯುವುದೆಂದು ತೀರ್ಮಾನವಾಗಿತ್ತು.  ಆದರೆ  ದುರಾದ್ರಷ್ಟವಶಾತ್  ಶಾಮರಾಯರು  ಜನವರಿ ೧೫ರಂದು ನಿಧನರಾದರು.
ಅವರ ಅಭಿಮಾನಿಗಳು  ಶಾಮರಾಯರ ಇಚ್ಚಾನುಸಾರವಾಗಿ ದತ್ತಿ ಉಪನ್ಯಾಸಕಾರ್ಯಕ್ರಮವನ್ನು ಫೆಬ್ರವರಿ ೯ರಂದೇ ನಡೆಸಲು  ತೀರ್ಮಾನಿಸಿ ಕಾರ್ಯಕ್ರಮದ ಹೆಸರಿಗೆ ಶಾಮರಾಯರ ಹೆಸರನ್ನೂ ಸೇರಿಸಿ  ನಡೆಸಲಾಯಿತು. ಉಪನ್ಯಾಸಕ್ಕೆ, ಬಿ. ಎಸ್. ವೆಂಕಟಲಕ್ಷ್ಮಿಯವರು ನಡೆಸಿದ 'ಚರ್ಚೆಗೊಂದು ಚಾವಡಿ' ಪುಟ್ಟಪತ್ರಿಕೆ ಗಮನದಲ್ಲಿಟ್ಟು,   "ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ" ಎಂಬ ವಿಷಯವನ್ನು  ಆರಿಸಲಾಯಿತು.

ಫೆಬ್ರವರಿ ೯ರಂದು ಸುಮಾರು ೧೧ ಘಂಟೆಗೆ ಸುಚಿತ್ರ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮೊದಲಿಗೆ ಅಗಲಿದ ದಂಪತಿಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ದಂಪತಿಗಳ ನೆರೆಯವನಾಗಿದ್ದ ದಿನೇಶ್ ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡರು.

 ಪ್ರೊ। ಎಚ್. ಎಸ್. ರಾಘವೇಂದ್ರರಾಯರು  ಸಾರ್ಥಕ ಹಾಗೂ ಅರ್ಥಪೂರ್ಣ ಬದುಕನ್ನು ಬದುಕಿದ ಈ ಗಂಡಹೆಂಡಿರನ್ನು  ಸ್ಮರಿಸಿ ಸಂಭ್ರಮಿಸಬೇಕು ನಾವು, ದುಃಖಪಡುವ ಅಗತ್ಯವಿಲ್ಲ ಎಂದರು. 'ಲೈಮ್ ಲೈಟ್ ' ಇಷ್ಟಪಡದ ವೆಂಕಟಲಕ್ಷ್ಮಿಯವರು ಸಮಾಜದಿಂದ ವಿಮುಖರಾದವರಲ್ಲ . ತಮ್ಮ 'ಚರ್ಚೆಗೊಂದು ಚಾವಡಿ' ಪತ್ರಿಕೆಯಲ್ಲಿ  ಗತಕಾಲದ ವಿಶಿಷ್ಟ ವ್ಯಕ್ತಿಚಿತ್ರಗಳನ್ನು ಬೆಳಕಿಗೆ ತರುವ  ಮೂಲಕ, 'ಪತ್ನಿಯರು ಕಂಡಂತೆ ಪ್ರಸಿದ್ಧರು' ಲೇಖನ ಸರಣಿಯಲ್ಲಿ   ಮರೆಯಲ್ಲಿದ್ದ ಮಹಿಳೆಯರ ಬಗ್ಗೆ ಬರೆಯುವ ಮೂಲಕ , 'ಬದುಕು ಬವಣೆ ಭರವಸೆ'   ಪುಸ್ತಕದಲ್ಲಿ ಕೆಲಸಮಾಡುವ  ಹೆಣ್ಮಕ್ಕಳ  ಬದುಕು ಬವಣೆಗಳ ಬಗ್ಗೆ ಬರೆಯುವ ಮೂಲಕ, ತನ್ನ ಚೌಕಟ್ಟಿನೊಳಗೆ ದಿಟ್ಟತನದಿಂದ
ಪ್ರಾಮಾಣಿಕತೆಯಿಂದ ನಮ್ಮ ಸಮುದಾಯದ ಮೇಲಿನ ಕಾಳಜಿಯಿಂದ ವೆಂಕಟಲಕ್ಷ್ಮಿಯವರು ಆದಷ್ಟು ವ್ಯಾಪಕವಾಗಿ ಸಂವಹನ ನಡೆಸಿದವರಾಗಿದ್ದರು. ಬೇಂದ್ರೆಯವರು ಬಣ್ಣಿಸುವ 'ಸಖೀ-ಸಖ' ಭಾವದ ಸೆಲೆ ಈ ದಂಪತಿಗಳಲ್ಲಿ ಹರಿಯುತ್ತಿದ್ದುದನ್ನು ಕಾಣಬಹುದಿತ್ತು. ವೆಂಕಟಲಕ್ಷ್ಮಿಯವರ ಅಗಲಿಕೆಯ ನಂತರವೂ  ಅವರನ್ನು ಮತ್ತೆ  ಮುನ್ನೆಲೆಗೆ ತರುವ ಬಗ್ಗೆ ರಿಯಲ್ ಸ್ಪೋರ್ಟ್ ಆಗಿದ್ದ  ಶಾಮರಾಯರು   ತೋರುತ್ತಿದ್ದ ಕಮಿಟ್ಮೆಂಟ್ ಅಪರೂಪದ್ದಾಗಿದೆ  ಎಂದರು.




ಜಯಂತ್ ಕಾಯ್ಕಿಣಿ  'ಚರ್ಚೆಗೊಂದು ಚಾವಡಿ' ಯನ್ನು ಸ್ಮರಿಸುತ್ತಾ  ಕನ್ನಡದಲ್ಲಿ  ಸಣ್ಣ ಪತ್ರಿಕೆಗಳು  ಬೆಳೆದು ಬಂದ ಹಾದಿಯ ಪರಿಚಯ ಮಾಡಿಕೊಡುತ್ತಾ ಅವುಗಳಿಂದ ಕನ್ನಡ ಸಾಹಿತ್ಯ ಪ್ರಪಂಚ ಶ್ರೀಮಂತಗೊಳಿಸುವತ್ತ ನೀಡಿದ ಕೊಡುಗೆಗಳನ್ನು, ಅವುಗಳಲ್ಲಿ ನಡೆಯುತ್ತಿದ್ದ ಗಂಭೀರ ಚರ್ಚೆಗಳನ್ನು ಉದಾಹರಿಸಿದರು.


ಪದ್ಮನಾಭ ಭಟ್ ಶೇವ್ಕಾರ್ ರವರು ಸಣ್ಣ ಪತ್ರಿಕೆಗಳ ಮಹತ್ವ ಮತ್ತು ಅವುಗಳ ಸವಾಲುಗಳ ಬಗ್ಗೆ ಮಾತನಾಡಿದರು. ವೆಂಕಟಲಕ್ಷ್ಮಿಯವರಲ್ಲಿದ್ದ ಗುಣಗಳಾದ - ನಿಷ್ಠುರತೆ, ಬದ್ಧತೆ, ಚಂದಾ ಇಲ್ಲದಿದ್ದರೂ ಪತ್ರಿಕೆ ನಡೆಸುತ್ತೇನೆ ಇಷ್ಟ ಇರುವತನಕ ಎನ್ನುವ ಎದೆಗಾರಿಕೆ - ಇವೆಲ್ಲ ಸಾಹಿತ್ಯಪತ್ರಿಕೆಗಳಿಗೆ ಇರಬೇಕಾದ ಗುಣಗಳಾಗಿರುತ್ತವೆ ಎಂದರು.



ಎಸ. ದಿವಾಕರ್ ಅವರು ೨೦ನೇ ಶತಮಾನದಲ್ಲಿ ಎಲ್ಲ ಪತ್ರಿಕೆಗಳೂ ಶುರುವಿನಲ್ಲಿ ಸಣ್ಣಪತ್ರಿಕೆಗಳೇ ಆಗಿದ್ದವು. ಗಾಂಧಿ, ಡಿ.ವಿ.ಜಿ. ಯವರಂಥವರು ನಡೆಸಿದ್ದ ಸಣ್ಣಪತ್ರಿಕೆಗಳು ಬೀರಿದ್ದ ಮೌಲ್ಯಯುತ  ಪ್ರಭಾವ ಯಾವ ದೊಡ್ದಪತ್ರಿಕೆಗಳಿಂದಲೂ ಬೀರಲಾಗಿರಲಿಲ್ಲ ಎಂದರು. ಹಾಗಾಗಿ ಇಂದಿಗೂ ಸಣ್ಣಪತ್ರಿಕೆಗಳ ಅಗತ್ಯವಿದೆ ಎಂದರು.

ದೀಪಾಗಣೇಶ್ ರವರು  ಶಾಮರಾಯರ ಒತ್ತಾಸೆಯ ಕಾರ್ಯಕ್ರಮಕ್ಕೆ ಅವರೇ ಇಲ್ಲವಾದುದಕ್ಕೆ ವಿಷಾದ ವ್ಯಕ್ತಪಡಿಸಿ, ಅವರು ನಮ್ಮ ಮನಸ್ಸಿನಲ್ಲಿರುತ್ತಾರೆನ್ನುತ್ತಾ ಭಾಗವಹಿಸಿದವರಿಗೆಲ್ಲ ಧನ್ಯವಾದಗಳನ್ನು ಸಮರ್ಪಿಸಿದರು. ಶಾಮರಾಯರ ತಮ್ಮ Dr. ರಾಜಾರಾಯರು ಅತಿಥಿಗಳಿಗೆ ಹೂವಿನಗಿಡಗಳನ್ನು  ಅರ್ಪಿಸಿ ಅಭಿನಂದಿಸಿದರು.
ಲಘು ಭೋಜನ, ಲಘು ಹರಟೆಗಳೊಂದಿಗೆ, ಎಂಟಿ -ಶ್ಯಾಂ ದಂಪತಿಗಳ ಒಡನಾಟದ  ನೆನಪುಗಳನ್ನು ಮೆಲಕುಹಾಕುತ್ತಾ  ಕಾರ್ಯಕ್ರಮ ಕೊನೆಗೊಂಡಿತು. 
ಕಾರ್ಯಕ್ರಮದ ದೃಶ್ಯಸರಣಿಗಳು ಇಲ್ಲಿವೆ :


Sunday, February 16, 2020

ಹೇಳಲಾರೆನು ರಂಗಾ ಹೇಳದುಳಿಯಲಾರೆನು ರಂಗಾ

ಇತ್ತೀಚಿಗೆ ಅಗಲಿದ ಎಚ್. ಏನ್. ಶಾಮರಾಯರು ಮತ್ತು ದಶಕದ ಹಿಂದೆ ಅಗಲಿದ ಬಿ. ಎಸ್. ವೆಂಕಟಲಕ್ಷ್ಮಿ ಯವರ ಸ್ಮರಣಾರ್ಥವಾಗಿ ನಡೆದ  ಉಪನ್ಯಾಸ ಕಾರ್ಯಕ್ರಮದಲ್ಲಿ ಅರ್ಪಿಸಿದ ಒಂದು  ನುಡಿನಮನ  ಹೀಗಿದೆ.
_______________________________________________________________


ಹೇಳಲಾರೆನು ರಂಗಾ ಹೇಳದುಳಿಯಲಾರೆನು ರಂಗಾ’ - ಇದು ಯಕ್ಷಗಾನದ ಸುಪ್ರಸಿದ್ದ ಹಾಡೊಂದರ ಸಾಲು. ಈಗ ನನ್ನ ಸ್ಥಿತಿಯೂ ಸ್ವಲ್ಪ ಹಾಗೆಯೇ  ಇದೆ. ವೆಂಕಟಲಕ್ಷ್ಮಿ ಮತ್ತು ಶಾಮರಾಯ ದಂಪತಿಗಳು ನನಗೆ ಮನೆಯವರಿದ್ದ ಹಾಗೆ.  ಮನೆಯವರ ಬಗ್ಗೆ ಮಾತನಾಡುವುದು ಕಷ್ಟ. ಆದರೂ ಅಪರೂಪದ ವಿಶಿಷ್ಟ ದಂಪತಿಗಳ ಬಗ್ಗೆ ಹೇಳಲೇಬೇಕು.

ಶತಮಾನದ ಆದಿಭಾಗದಲ್ಲಿ ನನಗೆ ಇವರ ಪರಿಚಯವಾಯಿತು.  ಬೆಂಗಳೂರಿನ ಇಂದ್ರನಗರಿಯಿಂದ ಬಿಳೇಕಹಳ್ಳಿ-ಎನ್ನುವ ಪಾತಾಳಕ್ಕೆ ಇವರು ವಾಸಕ್ಕಾಗಿ ಬಂದಾಗ, ನಾನೂ ಕೂಡ ಅಲ್ಲಿನ ಹೊಸ  ಅಪಾರ್ಟ್ಮೆಂಟ್-ಗೆ  ಅವರ ನೆರೆಯವನಾಗಿ ಬಂದಿದ್ದೆ. ಅಲ್ಲಿ ಪ್ರಾರಂಭದಲ್ಲಿ ಮಳೆಗಾಲ ಶುರುವಾಗುವ ಹೊತ್ತಿನಲ್ಲಿ,  ಕೊಳಚೆ ನೀರೊಳಗೆ ತೇಲುತ್ತ ಬದುಕುವ ಪ್ರಮೇಯವುಂಟಾದಾಗ, ನೀರು, ಚರಂಡಿ ಸಮಸ್ಯೆಗಳ ಪರಿಹಾರಕ್ಕಾಗಿ - ವೆಂಕಟಲಕ್ಷ್ಮಿ ಶಾಮರಾವ್ ನಮ್ಮೊಡನೆ ಮುಂಚೂಣಿಯಲ್ಲಿದ್ದು ಶ್ರಮಿಸಿದ್ದರು.

ವೆಂಕಟಲಕ್ಷ್ಮಿಯವರ ಕೆಲವು ಲೇಖನಗಳನ್ನು ಲಂಕೇಶ್ ಪತ್ರಿಕೆಯಲ್ಲಿ  ಓದಿದ್ದೆ.  ಪರಿಚಯವಾದ ಮೇಲೆ ಅವರು ಆಗಷ್ಟೇ ಆಲೋಚಿಸುತ್ತಿದ್ದ ಅವರ ಪತ್ರಿಕೆ -'ಚರ್ಚೆಗೊಂದು ಚಾವಡಿ' ಬಗ್ಗೆ ಹೇಳಿದರು. ನಾನು ಅದರ ಮೊದಲ ಓದುಗನಾಗುತ್ತಿದ್ದೆ. ಯಾಕೆಂದರೆ  ಉಳಿದವರಿಗೆ  ಪೋಸ್ಟ್ ಮೂಲಕ ಪತ್ರಿಕೆ ಹೋಗುತ್ತಿದ್ದರೆ ನನಗೆ ಕೈಯಾರೆ ಕೊಟ್ಟುಬಿಡುತ್ತಿದ್ದರು. ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ದಂಪತಿಗಳು ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಅವುಗಳಲ್ಲಿ ಸಂಗೀತ,ನೃತ್ಯ, ಚಿತ್ರಕಲಾ ಪ್ರದರ್ಶನಗಳೂ ಸೇರಿದ್ದವು. ಕೆಲವೊಮ್ಮೆ ವೆಂಕಟಲಕ್ಷ್ಮಿಯವರು ಚಾವಡಿಯಲ್ಲಿ ಅವರು ಅನಾವರಣಗೊಳಿಸುತ್ತಿದ್ದ ಅಪರೂಪದ ವ್ಯಕ್ತಿಗಳ ಬಗ್ಗೆ ವಿಸ್ತರಿಸಿ  ಹೇಳುತ್ತಿದ್ದರು.  ಸಾರ್ವಜನಿಕರಿಗೆ ತಿಳಿದಿರದ ಕೆಲವು ಪ್ರಸಿದ್ಧರ  ವ್ಯಕ್ತಿತ್ವದ  ಅವಗುಣಗಳ ಬಗ್ಗೆಅರಿವಿಲ್ಲದೆ, ಅವರನ್ನು ಅತಿಯಾಗಿ  ಆರಾಧಿಸುವವರ ಅಮಾಯಕತೆಗೆ   ಕನಿಕರಿಸುತ್ತಿದ್ದರು. ಕೃಷ್ಣಲೀಲೆಯಲ್ಲಿ ತೊಡಗುವ  ಪ್ರಸಿದ್ಧರೊಬ್ಬರ 'ಹೆಂಡತಿಯನ್ನು ಅನುಮಾನಿಸಿ ಮನೆಗೆ ಬೀಗ ಹಾಕಿ ಹೋಗುವ' ದುರ್ಗುಣದ ಬಗ್ಗೆ ವ್ಯಾಕುಲಚಿತ್ತರಾಗಿ ಹೇಳುತ್ತಿದ್ದರು. ಇನ್ನೊಬ್ಬರು  ಪ್ರಸಿದ್ದರು ತನಗೆ ಹಸಿವೆಯಾದಾಗ ಮನೆಯಲ್ಲಿರುವ ಹೆಂಡತಿ ಏನನ್ನಾದರೂ ತಂದು ಬಡಿಸಬೇಕೆಂದು ಅಪ್ಪಣೆ ಕೊಡಿಸುತ್ತಿದ್ದರು ಹೊರತು ತನ್ನ ಹೆಂಡತಿಯ ಹೊಟ್ಟೆ ತುಂಬಿದೆಯೇ ಎಂಬ ಬಗ್ಗೆ ಎಂದೂ ಕಾಳಜಿ ತೋರುತ್ತಿರಲಿಲ್ಲ - ಎಂಬ ಅಮಾನವೀಯ ಗುಣದ ಬಗ್ಗೆ ಜಿಗುಪ್ಸೆಪಟ್ಟು ಹೇಳುತ್ತಿದ್ದರು. ಪ್ರಸಿದ್ಧ ಕಲಾವಿದರೊಬ್ಬರು ಹಲವಾರು ಪ್ರಸಿದ್ಧ ಮಹಿಳೆಯರ ಮನೋವಶಗೊಳಿಸಿಕೊಂಡಿರುವೆನೆಂದು,  ಸಂಗ ಮಾಡಿರುವೆನೆಂದು, ವಿಕೃತ ವಾಗಿ ಬಡಾಯಿ ಕೊಚ್ಚುತ್ತಿದ್ದುದರ ಬಗ್ಗೆ ಕನಲಿ ಹೇಳುತ್ತಿದ್ದರು. ಇಂತಹವರ ಹೆಸರು ಹೇಳುತ್ತಿರಲಿಲ್ಲ. ಅವರಿಗೆ ಮನುಷ್ಯನ ದುರ್ಗುಣಗಳನ್ನು ಸಾರಿ ಹೇಳುತ್ತಾ ಹೋಗುವುದು ಇಷ್ಟವಾಗುತ್ತಿರಲಿಲ್ಲ, ಬಹುಶಃ ಕೆಡುಕನ್ನು ಬೆಳಕಿಗೆ ತಂದು ಬೆಳೆಸುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಕೆಡುಕನ್ನು ಬೆಳೆಸುವವರ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಹಾಲಾಹಲವನ್ನು ಕುಡಿದು ಅಮೃತ  ಹೊರಹಾಕುವ ಗುಣಕ್ಕೆ ಮನ್ನಣೆ ನೀಡುವವರಾಗಿದ್ದರು.

 
ವ್ಯಕ್ತಿಗಳ ಗುಣವಿಶೇಷಗಳನ್ನು ಗುರುತಿಸುವುದರಲ್ಲಿ, ಅವರ ಸೊಗಸಾದ    ವ್ಯಕ್ತಿ-ಚಿತ್ರಣವನ್ನು ರೂಪಿಸುವುದರಲ್ಲಿ ಅಪಾರ ಪರಿಣತಿಯನ್ನು ಪಡೆದಿದ್ದರು - ವೆಂಕಟಲಕ್ಷ್ಮಿಯವರು. ಹಲವಾರು ಸಾಹಿತಿಗಳು, ಪ್ರಸಿದ್ಧ ವ್ಯಕ್ತಿಗಳು,  ವೆಂಕಟಲಕ್ಷ್ಮಿಯವರಿಂದ ಚಿತ್ರಿತಗೊಳ್ಳಲು ಬಯಸುತ್ತಿದ್ದುದರ ಬಗ್ಗೆ ಶಾಮರಾಯರು ನನಗೆ ಹೇಳುತ್ತಿದ್ದರು.

ಸಂಪಾದಕಿಗೆ ಸಿಕ್ಕ ದೊಡ್ಡ ಸಂಪಾದನೆಯಂತೆ,  ಚಾವಡಿಗೆ ಪ್ರತಿಕ್ರಿಯೆಯಾಗಿ  ಹಿರಿಯರಿಂದ ಬರುವ ಪತ್ರಗಳ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಿದ್ದರು. ಚನ್ನವೀರ ಕಣವಿ, ವ್ಯಾಸರಾಯ ಬಲ್ಲಾಳ, ಯು ಆರ್  ಅನಂತಮೂರ್ತಿ  ಮುಂತಾದವರು ಮೆಚ್ಚುಗೆಯಿಂದ ಬರೆದ ಪತ್ರಗಳನ್ನು ನನಗೂ ತೋರಿಸಿದ್ದರು. ವರ್ಷಗಳ ಕಾಲ ವೆಂಕಟಲಕ್ಷ್ಮಿ ಅವರು ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ ೨೦೦-೩೦೦ ಜನರಿಗೆ ಪತ್ರಿಕೆ ಕಳಿಸುತ್ತಿದ್ದರು. ಪೋಸ್ಟ್ ಆಫೀಸ್ ನವರು ಚಾವಡಿ ಪತ್ರಿಕೆಗೆ ಚಂದಾ ನಿಗದಿ ಮಾಡದಿದ್ದರೆ ಅಂಚೆ ರಿಯಾಯಿತಿ ಸಿಗುವುದಿಲ್ಲ ಎಂದಾಗ ಕಿರಿಕಿರಿಯೆನಿಸಿ ಓದುಗರಿಗೆ ತಿಳಿಸಿದ್ದರು. ಆಗ ಹಲವು ಓದುಗರು ಹಣ ಕಳಿಸಿದಾಗ ಮತ್ತೆ ಅಸಮಾಧಾನವಾಗಿತ್ತು ಅವರಿಗೆ. ಇನ್ನೊಬ್ಬರ ಋಣಭಾರ ಉಳಿದುಹೋಗುವ ಆತಂಕ ಅವರಿಗಿರುತ್ತಿತ್ತು.    ಅವರು ಯುವ ಪತ್ರಕರ್ತ, ಪತ್ರಕರ್ತೆಯರನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು. ತಾನೂ ಜರ್ನಲಿಸಂ ಓದಿದ್ದರಿಂದಿರಬೇಕು.  ನಾನು ಜಪಾನಿಗೆ ಹೋಗಿದ್ದಾಗ 'ಚಾವಡಿ' ಸಿಗದೆ  ಚಡಪಡಿಕೆಯಾಗಿದೆ ಎಂದು ಉದ್ದ -ಮೇಲ್ ಬರೆದಾಗ ಅದನ್ನು ಚಾವಡಿಯಲ್ಲಿ ಪ್ರಕಟಿಸಿದ್ದರು, 'ನಿಮ್ಮ ಭಾಷೆ ಹಿಡಿಸಿತು' ಎಂದರು.   ಸಾಹಿತ್ಯ ಚರ್ಚೆಗಳೊಂದಿಗೆ  ಹಲವು ಬಾರಿ  ಅವರ ಮನೆಯಲ್ಲಿ ಹೊಟ್ಟೆಯನ್ನೂ ತುಂಬಿಸಿಕೊಂಡ ಹೆಗ್ಗಳಿಕೆ ನನ್ನದು. ಮಕ್ಕಳಿಲ್ಲದಿದ್ದರೂ ನನ್ನಂತವರಿಗೆ ತಾಯವಾತ್ಸಲ್ಯ ತೋರಿ ಧಾರಾಳವಾಗಿ ಉಣಬಡಿಸುತ್ತಿದ್ದರು.   ವರ್ಷಗಳು ನಿರಂತರ ಚಾವಡಿ ನಡೆಸಿದ ಬಳಿಕ ಅದೊಂದು ದಿನ ನನ್ನೊಡನೆ ಹೇಳಿಕೊಂಡಿದ್ದರು 'ಚಾವಡಿ ಸ್ವಲ್ಪ ಬೋರ್ ಅನ್ನಿಸ್ತಿದೆ, ನಿಲ್ಲಿಸೋಣ ಅಂದ್ಕೋತಾ ಇದ್ದೀನಿ, ಇನ್ನೇನಾದರೂ ಮಾಡ್ಬೇಕು' ಎಂದು.

ಬೆಳಗಿನ ಜಾವ ಗಂಟೆಗೆ ನಮ್ಮ ಅಪಾರ್ಟ್ಮೆಂಟ್ ನಲ್ಲಿ ವಾಕ್ ಮಾಡುತ್ತಿದ್ದ ವೆಂಕಟಲಕ್ಷ್ಮಿಯವರು ಅದೊಂದು ದಿನ ವಾಕ್ ಮುಗಿಸಿ ಮನೆಗೆ ಬಂದವರೇ ಕುಸಿದು ಬಿದ್ದವರು ಮತ್ತೆ ಮೇಲೇಳಲಿಲ್ಲವಂತೆ. ಅದರ ಹಿಂದಿನ ದಿನವೇ ಚಾವಡಿ ಪ್ರತಿಗಳನ್ನು ಪೋಸ್ಟ್ ಮಾಡುವುದಕ್ಕೆ ರೆಡಿ ಮಾಡಿಟ್ಟಿದ್ದರಂತೆ. ಒಂದು  ವಾರದ ಬಳಿಕ, ಒಂದು  ಬೆಳಗ್ಗೆ ಶಾಮರಾಯರು ಸಿಕ್ಕಾಗ,  ನನ್ನನ್ನು ನೋಡುತ್ತಾ ಬಾಡಿದ ನೋಟದಿಂದ 'ಸುದ್ದಿ ಗೊತ್ತಾಗಿಲ್ವ? ಎಂಟಿ  ಹೋಗ್ಬಿಟ್ಟಳು ವಾರದ ಹಿಂದೆ ' ಅಂದ್ರು. ಶಾಕ್ ಆಯಿತು. 'ನಂಗೆ ಮೊದ್ಲೇ ಯಾಕ್ ಹೇಳ್ಲಿಲ್ಲ' ಅಂದ್ರೆ 'ಆಕೆ ಯಾರಿಗೂ ಹೇಳ್ಬಾರ್ದು ಅಂದಿದ್ಲು'  ಎಂದು ಅವರ ವಿಲ್ ಬಗ್ಗೆ ವಿವರಿಸಿದರು. ನೆರೆಯಲ್ಲಿದ್ದೂ ತಡವಾಗಿ ಗೊತ್ತಾಗಿದ್ದಕ್ಕೆ ಬಹಳ ಬೇಸರವಾಗಿತ್ತು. ಅಂತೂ ವೆಂಕಟಲಕ್ಷ್ಮಿಯವರು 'ಯಾರಿಗೂ ಹೇಳೋಣು ಬ್ಯಾಡ ಯಾರಿಗೂ' ಎಂದು  ಸುದ್ದಿಮಾಡದೆ  'ಮುದ್ದು ಮಾಟದ ಕನಸಿನೂರಿಗೆ ಸದ್ದು ಮಾಡದೆ ಸಾಗಿದರು' ೨೦೦೯ ಜೂನ್ ೨೬ರಂದು ತಮ್ಮ ೬೩ನೇ ವಯಸ್ಸಿನಲ್ಲಿ.

ವೆಂಕಟಲಕ್ಷ್ಮಿಯವರದು ಸಂಕೋಚದ  ವ್ಯಕ್ತಿತ್ವವಾದರೆ, ಅವರ ಪತಿ ಶಾಮರಾಯರದ್ದು ಸ್ನೇಹಕ್ಕೆ ತೆರೆದುಕೊಳ್ಳುವ ವ್ಯಕ್ತಿತ್ವ. ಬಹುಶಃ ಅದು ಅವರು ಕ್ರೀಡಾಪಟುವಾಗಿದ್ದರಿಂದ ರೂಢಿಸಿಕೊಂಡ ವ್ಯಕ್ತಿತ್ವವಾಗಿರಬೇಕು. ನನಗೆ ಅವರ ಪರಿಚಯವಾಗುವಷ್ಟರಲ್ಲಿ ಅವರಿಗೆ ೬೦ ದಾಟಿತ್ತು. ಅವರದು ಸುಮಾರು ನನ್ನ ತಂದೆಯ ವಯಸ್ಸು. ಆದರೂ ನನ್ನನ್ನು ಗೆಳೆಯನ ಹಾಗೆ ಕಾಣುತ್ತಿದ್ದರು.  ಅವರು ತಾನೊಬ್ಬ ಕ್ರೀಡಾಪಟುವಾಗಿದ್ದೆ, ಕರ್ನಾಟಕ ರಾಜ್ಯದ ಖೋ-ಖೋ, ಕಬಡ್ಡಿ ಟೀಮ್ ಮೆಂಬರ್ ಆಗಿದ್ದೆ ಅಂದಾಗ ಬೊಗಳೆ ಬಿಡುತ್ತಿದ್ದಾರೆ ಅಂದುಕೊಂಡಿದ್ದೆ. ಒಮ್ಮೆ 'ಸುಚಿತ್ರ' ಆವರಣದಲ್ಲಿ ಒಬ್ಬರು ನನ್ನೆದುರೇ ಅವರನ್ನು ಮಾತನಾಡಿಸಿ 'ನಾನು ನಿಮ್ಮ ಫ್ಯಾನ್, ಹಿಂದೆ ನಿಮ್ಮ ಎಲ್ಲ ಮ್ಯಾಚುಗಳನ್ನು ನೋಡಲು ಹಾಜರಾಗುತ್ತಿದ್ದೆ' ಎಂದು ಪರಿಚಯಿಸಿಕೊಂಡರು. ಆವಾಗಲೇ ನನಗೆ ಇವರು ಎಷ್ಟು ಪಾಪ್ಯುಲರ್ ಸ್ಪೋರ್ಟ್ಸ್ಮನ್ ಎಂದು ಗೊತ್ತಾದದ್ದು. ಸಚಿನ್ ತೆಂಡೂಲ್ಕರ್ ಹಿಂಬಾಲಿಸುವರಿದ್ದ ಹಾಗೆ ಶಾಮರಾಯರನ್ನೂ ಹಿಂಬಾಲಿಸುವರಿದ್ದಾರೆಂದು ತಿಳಿದದ್ದು!   ಅವರ ಹಳೆಯ ಗೆಳೆಯರ ಬಳಗದವರೆಲ್ಲ ಹೆಮ್ಮೆಯಿಂದ ಹೇಳುತ್ತಿದ್ದರು - 'ಶಾಮರಾಯರು ಎಷ್ಟು ಚೆನ್ನಾಗಿ ಪಾದರಸದಂತೆ ಚಲಿಸುತ್ತ ಖೋ-ಖೋ, ಕಬಡ್ಡಿ ವಾಲಿಬಾಲ್  ಆಟವಾಡುತ್ತಿದ್ದರು  -ಎಂದು. ವೆಂಕಟಲಕ್ಷ್ಮಿಯವರ ಕಾಲಾನಂತರ, ಶಾಮರಾಯರೂ ನಾನೂ ಬೆಂಗಳೂರಿನ ಯಾವ ಮೂಲೆಯಲ್ಲಿ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೂ ಹಾಜರಾಗುತ್ತಿದ್ದೆವು. ಬೆಂಗಳೂರಿನ ಟ್ರಾಫಿಕ್ ಜಾಮ್ ಗಳನ್ನು ತಪ್ಪಿಸಿಕೊಂಡು ಹೋಗಲು ನಾನು ಅವರನ್ನು ನನ್ನ ಬೈಕ್ನಲ್ಲಿ ಕೂರಿಸಿಕೊಂಡು ಸಂಧಿಗೊಂದಿಗಳಲ್ಲೆಲ್ಲ ಅಲೆದಾಡಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದೆ. ಒಮ್ಮೆ ಹಿಂತಿರುಗಿ ಬರುವಾಗ ಮನೆಯ ಸಮೀಪದ ತಿರುವಿನಲ್ಲಿ ಬೈಕ್ ಸ್ಕಿಡ್ಡಾಗಿ ನಾವಿಬ್ಬರೂ ಬಿದ್ದು, ಅವರ ಕೈಗೆ ತರಚಿದ ಗಾಯವಾಗಿತ್ತು. ಪುಣ್ಯಕ್ಕೆ ಫ್ರಾಕ್ಚರ್ ಆಗಿರಲಿಲ್ಲ. ಅವರ ಡಾಕ್ಟರ್ ತಮ್ಮ ಬಯ್ಯುವರೇನೋ ಅಂದು ಅಂಜಿಕೊಂಡಿದ್ದೆ. ಅವರ ತಮ್ಮ ಡಾಕ್ಟರ್ ರಾಜಾರಾವ್ ಶಾಮರಾಯರ ಆರೋಗ್ಯದ ಬಗ್ಗೆ ಸದಾ ಗಮನವಿಟ್ಟಿದ್ದರು. ೨೦೧೫ರಲ್ಲಿ ರಾಜಾರಾವ್ ಮನೆಯಲ್ಲಿದ್ದಾಗಲೇ ಶಾಮರಾಯಾರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ರಾಜಾರಾಯರು ತುರ್ತಾಗಿ ಚಿಕಿತ್ಸೆ ಕೊಡಿಸಿದ್ದರಿಂದ ಬದುಕಿಕೊಂಡರು. ಆದರೆ ನಂತರದ ದಿನಗಳಲ್ಲಿ ಹೃದಯ ಸಂಬಂಧದ ತೊಂದರೆಗಳಿಂದ ಅವರ ಅರೋಗ್ಯ ಸರಿ ಇರದಿದ್ದುದರಿಂದ  ಶಾಮರಾಯರ ತಿರುಗಾಟಗಳಿಗೆ ಕಡಿವಾಣ ಹಾಕಿದಂತಾಯಿತು. ಇಷ್ಟಾದರೂ ತನ್ನ ತೊಂದರೆಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳುತ್ತಿರಲಿಲ್ಲ. "I am fine, 100% fit" ಎನ್ನುತ್ತಲೇ  ಇದ್ದರು. ಸದಾ ಸ್ನೇಹಿತರ ಸಂಗ ಬಯಸುತ್ತಿದ್ದರು. ಅದು ಹೇಗೋ ಹೊಸ ಸ್ನೇಹಿತರನ್ನು ಹುಡುಕಿಕೊಳ್ಳುತ್ತಿದ್ದರು. ಅವರ ಚುಂಬಕ ವ್ಯಕ್ತಿತ್ವ ನಮಗೆ ಆಶ್ಚರ್ಯ ಉಂಟು ಮಾಡುತ್ತಿತ್ತು.

ವೆಂಕಟಲಕ್ಷ್ಮಿಯವರ ಆಸಕ್ತಿಗಳಿಗೆ ಸದಾ ಬೆಂಬಲಿಸುತ್ತಿದ್ದವರು ಶಾಮರಾವ್. ಪತ್ನಿಯ ನಿಧನದ ನಂತರ ಹಿತೈಷಿಗಳ ಪ್ರೋತ್ಸಾಹದಿಂದ  ಒಂದು ವರ್ಷದಲ್ಲೇ  'ಚಾವಡಿ' ಅಂಕಣಗಳನ್ನು ಜೋಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅದರೊಡನೆ ಪತ್ನಿಯ ಅಕಾಡೆಮಿ ಪ್ರಶಸ್ತಿ ಪಡೆದ ಪುಸ್ತಕ 'ಬದುಕು ಬವಣೆ, ಭರವಸೆ' ಮರುಮುದ್ರಣ ಮಾಡಿಸಿ ಅವುಗಳ ಬಿಡುಗಡೆಯ ಸಮಾರಂಭವನ್ನೂ ಏರ್ಪಡಿಸಿದರು. ಆಗಷ್ಟೇ  ನಾನು ನನ್ನ ಉದ್ಯೋಗದಿಂದ ಬಿಡುವು ಪಡೆದಿದ್ದುದರಿಂದ ಕಾರ್ಯದಲ್ಲಿ ಹೆಗಲು ಕೊಡುವುದು ಸಾಧ್ಯವಾಯಿತು.
ಮತ್ತೆ ಹಲವು ವರ್ಷಗಳ ಬಳಿಕ ತಮ್ಮ ಅನಾರೋಗ್ಯದ ನಡುವೆಯೂ  ೯೦ರ ದಶಕದ ಆರಂಭದಲ್ಲಿ ಮಯೂರದಲ್ಲಿ ಪ್ರಕಟವಾಗಿದ್ದ  'ಪತ್ನಿಯರು ಕಂಡಂತೆ ಪ್ರಸಿದ್ಧರು' ಎಂಬ ಲೇಖನ ಸರಣಿಯ ಲೇಖನಗಳನ್ನೆಲ್ಲ ಸೇರಿಸಿ  'ಆಹರ್ನಿಶಿ' ಪ್ರಕಾಶನದ ಮೂಲಕ ಪ್ರಕಟಿಸಿ ಅದರ ಬಿಡುಗಡೆಯ ಸಮಾರಂಭವನ್ನು ೨೦೧೮ರಲ್ಲಿ  ಆಯೋಜಿಸಿದರು.  ಕೆಲವು - ತಿಂಗಳಿನ ಹಿಂದೆ ಪತ್ನಿಯ ಹೆಸರಿನಲ್ಲಿ ಸುಚಿತ್ರದಲ್ಲಿ ದತ್ತಿ ಉಪನ್ಯಾಸ ಏರ್ಪಡಿಸುವ ಆಲೋಚನೆ ಮಾಡಿ ಅದರ ಪ್ರಯುಕ್ತ ಹಲವರಲ್ಲಿ ಚರ್ಚಿಸಿ ಕಾರ್ಯಪ್ರವೃತ್ತರಾಗಿದ್ದರು. ಮೊದಲ ಸಮಾರಂಭವನ್ನು ಅವರ ನೆಚ್ಚಿನ ಸಾಹಿತಿಜಯಂತ್ ಕಾಯ್ಕಿಣಿಯಿಂದಲೇ ಶುರು ಮಾಡಿಸಬೇಕೆಂದು ಬಯಸಿದ್ದರು. ಕಾರಣಾಂತರಗಳಿಂದ  ಅದು ಮುಂದೂಡಲ್ಪಟ್ಟು ಇತ್ತೀಚಿಗೆ ಫೆಬ್ರುವರಿ ಎಂದು ನಿಗದಿಯಾಗಿತ್ತು.
ಶಾಮರಾಯರು  ಇಂತಹ  ಸಮಾರಂಭಗಳನ್ನು ನಡೆಸುವುದರಲ್ಲಿ ಸಂಭ್ರಮ ಪಡುತ್ತಿದ್ದರು, ಮಕ್ಕಳು ಹಬ್ಬದಲ್ಲಿ ಸಂಭ್ರಮಿಸಿದ ಹಾಗೆ.  ಯಾವ ಸ್ನೇಹಿತರು ಅವರಲ್ಲಿಗೆ   ಬಂದರೂ 'ಬಾ, ದೋಸೆ ಕೊಡಿಸ್ತೀನಿ' ಎಂದು ಕರ್ಕೊಂಡು ಹೋಗುತ್ತಿದ್ದರು. ಅವರು ಇನ್ನೊಬ್ಬರ ಹೊಟ್ಟೆ ತುಂಬಿಸುವುದರಲ್ಲೇ ಸುಖ  ಕಾಣುತ್ತಿದ್ದರು.
ಕಳೆದ ದೀಪಾವಳಿಯ ನಂತರ ನನಗೆ ಹಾರ್ಟ್ ಅಟ್ಟ್ಯಾಕ್ ಆದಾಗ ಬಹಳ ನೊಂದುಕೊಂಡಿದ್ದರು. 'ಏನೋ ದಿನೇಶ?, ನಮಗೇನೋ ಸರಿ, ನಿನ್ನಂಥವನಿಗೆ ಆಗಿದ್ದು ಅನ್ಯಾಯ' ಅಂದರು. ತಮಾಷೆ ಮಾಡುತ್ತಾ ನಾನಂದೆ - 'ಯಮ ಧರ್ಮರಾಯನಿಗೆ ಕ್ಯೂ ಪದ್ಧತಿ ತಿಳಿದಿಲ್ಲವಂತೆ!. ನೋಡಿ ವೆಂಕಟಲಕ್ಷ್ಮಿಯವರು  ಮೊದಲೇ ಹೋಗಿಬಿಟ್ಟಿದ್ದಾರಲ್ಲ!' ಎಂದೆ . ಪಾಪ! ಶಾಮರಾಯರ ದುಃಖದ ಹಳುವನ್ನು ಕುಕ್ಕಿದಂತಾಯಿತೋ ಏನೋ ತಿಳಿಯದು. ಎಷ್ಟೆಂದರೂ ಅವರು ಅಳು ನುಂಗಿ ನಗುವ ಜಾಯಮಾನದವರು.

ಮೊನ್ನೆ ಮಕರ ಸಂಕ್ರಾಂತಿಯ ದಿನ  ಮಧ್ಯಾಹ್ನ ಅವರ ಬಳಿ ಹೋದಾಗ ಕೇಳಿದರು 'ನೀನು ಸುಚಿತ್ರದ ಕಾರ್ಯಕ್ರಮದ ಏರ್ಪಾಡುಗಳನ್ನು ಯಾವಾಗ Finalize ಮಾಡಿಕೊಂಡು ಬರುತ್ತೀಯ? ನಾನು ಹೋದ ಮೇಲೆಯೋ?'. "ಈಗಲೇ ಅಲ್ಲಿಗೆ ಹೋಗಿ ಮಾತನಾಡಿಕೊಂಡು ಬರುತ್ತೇನೆ. ಅಲ್ಲಿಗೇ  ಹೊರಟವನು ನಾನು" ಅಂದೆ. ಸ್ವಲ್ಪ ಹೊತ್ತು ಅವರೊಡನೆ ಮಾತನಾಡಿ  ಸುಚಿತ್ರದ ಕಡೆಗೆ ಹೊರಟೆ. ಅರ್ಧ  ದಾರಿಯಲ್ಲಿ ಅವರ ಬಳಿಯಿದ್ದ ಗೆಳೆಯ ಗಣೇಶ್ ಫೋನ್ ಮಾಡಿಸ್ವಲ್ಪ ಬನ್ನಿ, ಶಾಮರಾಯರು ಸ್ವಲ್ಪ ಮೇಲುಸಿರು ಬಿಡುತ್ತಿದ್ದಾರೆಎಂದರು. ವಾಪಾಸು ಹೋಗುವಷ್ಟರಲ್ಲಿ ಅವರು ಸ್ವಲ್ಪ ಸುಧಾರಿಸಿದ್ದರು. ಗಣೇಶ್ ಮಾತ್ರೆಯೊಂದನ್ನು ಕೊಟ್ಟಿದ್ದರು. ಆದರೂ ಕೂಡಲೇ ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದೇ ಎಂದು   ಭಾವಿಸಿ ಅವರ ತಮ್ಮ ಡಾಕ್ಟರ್ ರಾಜಾರಾವ್ ಗೆ ತಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು.  ಆಸ್ಪತ್ರೆ ತಲುಪಿದ ಕೆಲವು ಕ್ಷಣಗಳಲ್ಲಿ ಅನಿರೀಕ್ಷಿತವಾಗಿ ಕೊನೆಯುಸಿರೆಳೆದರು.

 
ಭೀಷ್ಮ ಉತ್ತರಾಯಣಕ್ಕೆ ಕಾದಿದ್ದನಂತೆ. ಶಾಮರಾಯರೂ ಕೂಡ ಉತ್ತರಾಯಣಕ್ಕೇ ಕಾದಿದ್ದವರಂತೆ ಹೊರಟರೇ ? ಸುಚಿತ್ರದ  ಹಬ್ಬಕ್ಕಾದರೂ ಕಾಯಬಾರದಿತ್ತೇ ? -  ಎಂದುಕೊಳ್ಳುತ್ತೇನೆ.
ಅಪರೂಪದ ಸ್ಪೂರ್ತಿದಾಯಕ  ದಂಪತಿಗಳು ನನ್ನ ನೆನಪಿನಲ್ಲಿ ಹಸಿರಾಗಿ   ಉಳಿದಿರುತ್ತಾರೆ, ಉಳಿಯುತ್ತಾರೆ, ಹಾಗೂ ಇನ್ನೂ ಹಲವರ ನೆನಪಿನಲ್ಲೂ  - ಎಂದುಕೊಳ್ಳುತ್ತೇನೆ.
ನಮಸ್ಕಾರ

ದಿನೇಶ್ ಕುಮಾರ ಶೆಟ್ಟಿ ತೆಕ್ಕಟ್ಟೆ 

(dineshks at gmail.com)