Monday, September 10, 2018

'ಪತ್ನಿಯರು ಕಂಡಂತೆ ಪ್ರಸಿದ್ಧರು' (ವ್ಯಕ್ತಿಚಿತ್ರಗಳು) ಪುಸ್ತಕ ಅನಾವರಣ ( Icons through the eyes of wives -A collection of personalities)

ಅದೊಂದು ಸುಂದರ  ಭಾನುವಾರ. ಕವಿದಿದ್ದ ಮೋಡಗಳು ಸರಿದು ಹೋಗಿ ಹೊತ್ತು ಸ್ವಲ್ಪ ಕಣ್ ತೆರೆದು  ಬೆಚ್ಚಗೆ ಒಂದಿಷ್ಟು  ಸಾಹಿತ್ಯಾಸಕ್ತರು ಸೇರಿ (೯ ವರ್ಷದ ಹಿಂದೆ )  ಸಂದು ಹೋದ ಮಹತ್ವದ ಲೇಖಕಿಯನ್ನು ಸ್ಮರಿಸಿಕೊಂಡರು.  ಆ ಲೇಖಕಿ - ಬಿ. ಎಸ್. ವೆಂಕಟಲಕ್ಷ್ಮಿ - ಎರಡು ದಶಕಗಳಿಗೂ ಹಿಂದೆ ಮಯೂರ ಮಾಸಪತ್ರಿಕೆಯಲ್ಲಿ ಬರೆದ ವ್ಯಕ್ತಿಚಿತ್ರ ಲೇಖನಮಾಲೆ  'ಪತ್ನಿಯರು ಕಂಡಂತೆ ಪ್ರಸಿದ್ಧರು'  - ಪುಸ್ತಕರೂಪದಲ್ಲಿ ಹೊರಬಂದಿತು.
ವೆಂಕಟಲಕ್ಷ್ಮಿಯವರ  ಸಹಪಾಠಿ  ಮತ್ತು ಸಹೋದ್ಯೋಗಿಯಾಗಿದ್ದ 'ಶ್ರೀಮತಿ ಜಯರಾಂ'ರವರ ಸುಶ್ರಾವ್ಯ ಗಾಯನ 
ಸಮಾರಂಭಕ್ಕೆ ಶುಭಾರಂಭವನ್ನು ಒದಗಿಸಿತ್ತು. 
'ಥಳಥಳಿಪ  ನಗೆಮೊಗದ' ಪ್ರಸಿದ್ಧ ಲೇಖಕರಾದ ಜಯಂತ್ ಕಾಯ್ಕಿಣಿ, ವೆಂಕಟಲಕ್ಷ್ಮಿಯವರ ಒಡನಾಟವನ್ನು ಸ್ಮರಿಸಿ  ಅವರ ದಿಟ್ಟತನ, ಅವರ ಲೇಖನಗಳ ವೈಶಿಷ್ಟ್ಯ ಗಳ  ಕುರಿತು ಸ್ವಾರಸ್ಯಕರವಾಗಿ ಮಾತನಾಡುತ್ತಾ ಅದು  ಹೇಗೆ ವೆಂಕಟಲಕ್ಷ್ಮಿಯವರು ಪ್ರಸಿದ್ಧರ ಪತ್ನಿಯರೊಂದಿಗೆ ಸಂಭಾಷಿಸುತ್ತ ಪ್ರಸಿದ್ಧರ ಕುರಿತು ಒಂದು ವಿಶಿಷ್ಟ ಒಳನೋಟಗಳ ಹೊಸಬಗೆಯ ಚಿತ್ರಣಗಳನ್ನು ಕಟ್ಟಿಕೊಡುತ್ತಿದ್ದರು ಎಂದು ಸೋದಾರಣವಾಗಿ ವಿವರಿಸಿದರು.
ಅದು ಹೇಗೆ - ಒಬ್ಬ ಬಾಹ್ಯಾಕಾಶ ವಿಜ್ಞಾನಿಗೆ  ಉಪಗ್ರಹ ಯಶಸ್ವೀ  ಉಡಾವಣೆಯಿಂದ  ಸಿಗುವ ಖುಷಿಗಿಂತ ತಾನು ಹದವಾಗಿ ಹೆಪ್ಪು  ಬೆರೆಸಿ  ದೊರಕಿದ ಗಟ್ಟಿಮೊಸರು ಕಂಡು ಪಡುವ ಸಂಭ್ರಮ ದೊಡ್ಡದಾಗಿರುತ್ತಿತ್ತು - ಎನ್ನುವ ಸಾರ್ವಜನಿಕರ ಊಹೆಗೆ  ನಿಲುಕದ ವ್ಯಕ್ತಿ ವಿಶಿಷ್ಟತೆಗಳು ಈ ಪುಸ್ತಕದ  ತುಂಬಾ ಹರಡಿಕೊಂಡಿರುವುದನ್ನುರಸವತ್ತಾಗಿ ಬಣ್ಣಿಸಿದರು.  
ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ ವೆಂಕಟಲಕ್ಷ್ಮಿಯವರ ಪರಿಣತಿ ಮಹತ್ತರವಾದದ್ದು. ಹಲವು ಕ್ಷೇತ್ರಗಳ ಬಗ್ಗೆ ಅವರಿಗಿರುವ ಆಸಕ್ತಿಯಿಂದ  ಅವರು ವಿವಿಧ ಕ್ಷೇತ್ರಗಳಲ್ಲಿನ ಪರಿಣಿತರೆಲ್ಲರ ವ್ಯಕ್ತಿಚಿತ್ರಗಳನ್ನು ಸಮರ್ಥವಾಗಿ ಕಟ್ಟಿಕೊಡಲು ಸಫಲರಾದರು.  ಈ ಪುಸ್ತಕ ಮುಂದಿನ ಪೀಳಿಗೆಗೆ ಮಹತ್ವದ ಕಾಣಿಕೆ ಯಾಗಬಲ್ಲುದು ಎಂದರು. 

ಹಿರಿಯ ಲೇಖಕಿ ಡಾ. ಬಿ. ಎನ್. ಸುಮಿತ್ರಾಬಾಯಿ  ಮಾತನಾಡುತ್ತಾ - ವೆಂಕಟಲಕ್ಷ್ಮಿಯವರು ತಾನು ಸ್ರೀವಾದಿಯೆಂದು  ಗುರುತಿಸಿಕೊಳ್ಳಲು ಒಪ್ಪದಿದ್ದರೂ  ಮಹಿಳೆಯವರ ಕುರಿತ ಅವರ ಬರಹಗಳು, ಮಹಿಳೆಯರ ದಿಟ್ಟತನವನ್ನು, ಧೋರಣೆಗಳನ್ನು  ಅವರು ಎತ್ತಿತೋರುತ್ತಿದ್ದ ಬಗೆ  - ಸ್ತ್ರೀವಾದಿ ಲೇಖಕಿಯರ ಧೋರಣೆಗಳ ಸಾಲಿಗೆ ಸೇರುತ್ತವೆ.  ಪ್ರಸಿದ್ಧರ ಪತ್ನಿಯರನ್ನು ಮಾತನಾಡಿಸುತ್ತಾ ಅವರ ಸುಖದುಃಖಗಳಿಗೆ ಮಿಡಿಯುತ್ತಾ , ಅವರ  ಭಾವನೆಗಳಿಗೆ ದನಿಯಾಗುವ  ವೆಂಕಟಲಕ್ಷ್ಮಿಯವರ ಮನಸ್ಸು ಅವರ ಘನತ್ವವನ್ನು ತೋರಿಸುತ್ತದೆ, ಅವರ ಬರಹಗಳು ಮಹತ್ವದ್ದು ಎನಿಸುತ್ತದೆ   - ಎಂದರು.

ವೇದಿಕೆ ಒದಗಿಸುವದರಲ್ಲಿ ಸಿದ್ಧಹಸ್ತರಾಗಿರುವ, ರಂಗಭೂಮಿಯಲ್ಲಿ ಅಪಾರ ಪರಿಣತಿ ಹೊಂದಿರುವ ಕಪ್ಪಣ್ಣ ಜಿ. ಶ್ರೀನಿವಾಸ್,  ಈ ಸಮಾರಂಭದ ವೇದಿಕೆಯನ್ನು ಕಂಗೊಳಿಸುವಂತೆ ಕಟ್ಟಿಕೊಟ್ಟಿದ್ದಲ್ಲದೆ, ಸಹೋದ್ಯೋಗಿಯಾಗಿದ್ದ 'ಅಕ್ಕ' ವೆಂಕಟಲಕ್ಷ್ಮಿಯವರನ್ನು ಸಕಾರಣವಾಗಿ ನೆನೆಯುತ್ತ, 'ಸುಮನೋನುರಾಗದಿಂ ಪಲವು ಬಣ್ಣಂಗಳಿಂ ರಂಜಿಸುತ್ತ'  ಆಪ್ತ ವಾತಾವರಣದಲ್ಲಿ ಸಭಿಕರಿಗೆ ಹಿತವಾಗುವಂತೆ  ಸಮಾರಂಭ ನಡೆಸಿಕೊಟ್ಟರು.
ವೆಂಕಟಲಕ್ಷ್ಮಿಯವರ ಸರಕಾರದ (ವಾರ್ತಾ ಇಲಾಖೆ) ಉದ್ಯೋಗದ ಅವಧಿಯಲ್ಲಿ ಅವರನ್ನು, ಅವರ ಬರವಣಿಗೆಯನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಮೇಲಧಿಕಾರಿಯಾಗಿದ್ದ ಶ್ರೀ ಚಿರಂಜೀವಿ ಸಿಂಗ್ ರವರು ವೆಂಕಟಲಕ್ಶ್ಮಿಯವರ ನೆನಪನ್ನು ಹಂಚಿಕೊಂಡರು. 
ಮಯೂರ ಮಾಸಪತ್ರಿಕೆಯ ಸಂಪಾದಕರಾಗಿದ್ದ ಜಿ. ಎನ್. ರಂಗನಾಥರಾಯರು ತನ್ನ ಕನಸಿನ ಕೂಸಾಗಿದ್ದ 'ಪತ್ನಿಯರು ಕಂಡಂತೆ ಪ್ರಸಿದ್ಧರು'  ಲೇಖನ  ಸರಣಿಗೆ ಹೇಗೆ ವೆಂಕಟಲಕ್ಷ್ಮಿಯವರು ಸಮರ್ಥವಾಗಿ  'ಮಾಂಸಖಂಡ ರಕ್ತ ತುಂಬಿ' ಜೀವಕೊಟ್ಟರು ಎಂದು ಆ ಕಾಲದ   ಸಾಂದರ್ಭಿಕ   ಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು.  ಪುಸ್ತಕದ ಪ್ರಕಾಶಕಿ ಅಕ್ಷತಾ ಹುಂಚನಕಟ್ಟೆ - ತಮ್ಮಂಥ ಯುವ ಲೇಖಕಿಯರಿಗೆ ವೆಂಕಟಲಕ್ಷ್ಮಿಯವರ ಬರವಣಿಗೆಗಳು ಸ್ಪೂರ್ತಿದಾಯಕವಾಗಿದ್ದವು, ಅವರ ಪುಸ್ತಕ ತಮ್ಮ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ - ಎಂದರು.

ಹಿರಿಯ ಲೇಖಕಿಯರಾದ ಡಾ| ವಿಜಯಾ , ಉಮಾರಾವ್, ಡಾ|ಹೇಮಾ ಪಟ್ಟಣಶೆಟ್ಟಿ ಆರಂಭಕ್ಕೆ ದೀಪ ಬೆಳಗಿಸಲು ಕೈಜೋಡಿಸಿದರು. . ಡಾ| ವಿಜಯಾ  ಪುಸ್ತಕ ಬಿಡುಗಡೆಗೊಳಿಸಿದರು.
ಗಣ್ಯರೆಲ್ಲ - 'ಪ್ರತಿಯೊಬ್ಬ ಸಾಧಕನ ಹಿಂದೆ ಮಹಿಳೆಯೊಬ್ಬಳ ಸಹಾಯವಿರುತ್ತದೆ' ಎಂಬ ನಾಣ್ಣುಡಿಗೆ ವೆಂಕಟಲಕ್ಷ್ಮಿಯವರ ಈ ಪುಸ್ತಕದ ಲೇಖನಗಳು ಗಟ್ಟಿ ಪುರಾವೆಗಳನ್ನು ಒದಗಿಸುತ್ತವೆ,  ಹಾಗೆಯೇ  ಪತ್ನಿಯ ಬರವಣಿಗೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ, ಪತ್ನಿಯ ಅಕಾಲಿಕ ಅಗಲುವಿಕೆಯ ಬಳಿಕವೂ ಅವರ ಬರವಣಿಗೆಗಳನ್ನು ಬೆಳಕಿಗೆ ತರಲು ಶ್ರಮಿಸುತ್ತಿರುವ  ವೆಂಕಟಲಕ್ಷ್ಮಿಯವರ ಪತಿ ಎಚ್. ಎನ್.  ಶಾಮರಾಯರಿಗೆ  ಉಘೇ  ಎಂದರು; ಮಾದರಿಯಾಗಬಲ್ಲವರು   ಎಂದರು.


ವೃದ್ಧಾಪ್ಯದ ಅನಾರೋಗ್ಯದ ನಡುವೆಯೂ ಬಿ. ಎಸ್. ವೆಂಕಟಲಕ್ಷ್ಮಿ ಅವರ ಪತಿ ಈ ಸಮಾರಂಭವನ್ನು ಹುಮ್ಮಸ್ಸಿನಿಂದ ಆಯೋಜಿಸಿದ್ದರು.   

ಸಮಾರಂಭದ ಇನ್ನಷ್ಟು ಚಿತ್ರಗಳು ಇಲ್ಲಿವೆ 

No comments:

Post a Comment